ಡೂಬ್ರಾವ್ನಿಕ್
ಯೂಗೋಸ್ಲಾವಿಯದ ಕ್ರೋವಾಷಿಯ ಸಮಾಜವಾದಿ ಗಣರಾಜ್ಯದಲ್ಲಿ ಡಾಲ್ಮೇಷಿಯ ಪ್ರದೇಶದಲ್ಲಿರುವ ಒಂದು ಬಂದರು. ಏಡ್ರಿಯಾಟಿಕ್ ಸಮುದ್ರದ ದಕ್ಷಿಣ ತೀರದಲ್ಲಿ ಬೆಲ್ಗ್ರೇಡಿನ ನೈಋತ್ಯಕ್ಕೆ 579 ಕಿಮೀ. (360 ಮೈ.) ದೂರದಲ್ಲಿ ಇದೆ. ಜನಸಂಖ್ಯೆ 26,000 (1965).

	ಯೂಗೊಸ್ಲಾ ಕರಾವಳಿಯ ಅತ್ಯಂತ ಸುಂದರ ನಗರವಿದು. ಬೆಣಚುಕಲ್ಲಿನ ಚಾಚುಬಂಡೆಯ ಮೇಲೆ ನಗರ ನಿರ್ಮಿತವಾಗಿದೆ. ನೀರಿನ ಅಂಚಿನಿಂದಲೇ ಮೇಲೆದ್ದಿರುವ ಕೋಟೆಗೋಡೆಗಳೂ ದೈತ್ಯಕಾರದ ಗೋಪುರವೂ ಈ ನಗರದ ಗಗನ ರೇಖೆಗಳು. ಕೋಟೆಗೋಡೆಗಳಾಚೆಗೆ ಉದ್ಯಾನಗಳಿಂದ ಆವೃತವಾದ ಹಲವಾರು ಒಂಟಿಮನೆಗಳಿವೆ. ನಗರದ ಮುಖ್ಯ ಬೀದಿಯ ಆಚೀಚೆ ಬದಿಗಳಲ್ಲಿ ಪುನರುಜ್ಜೀವನದ ಅಂತಿಮ ಘಟ್ಟದ ಕಾಲದ ಸುಂದರವಾದ ಮನೆಗಳನ್ನು ಕಾಣಬಹುದು. ಈ ರಸ್ತೆ ಒಂದು ಕಣಿವೆಯಲ್ಲಿ ಸಾಗುತ್ತದೆ. 13ನೆಯ ಶತಮಾನದ ವರೆಗೂ ಈ ಕಣಿವೆ ಜವುಗಿನಿಂದ ಕೂಡಿದ ಒಂದು ಕಾಲುವೆಯಾಗಿತ್ತು. ಕೋಟೆಯೊಳಕ್ಕೆ ಮೋಟಾರುವಾಹನಗಳ ಪ್ರವೇಶವಿಲ್ಲ. ಮುಖ್ಯರಸ್ತೆಯನ್ನುಳಿದು ಅಲ್ಲಿಯ ಇತರ ಬೀದಿಗಳು ಬಲು ಕಿರಿದು, ಕಡಿದು, ಅಂಕುಡೊಂಕು. ನಗರದ ಎರಡು ಕೊನೆಗಳಲ್ಲಿ 14ನೆಯ ಶತಮಾನದ ಸಂನ್ಯಾಸಿನೀ ಮಠಗಳಿವೆ. ರೆಕ್ಟರನ ಅರಮನೆ ಡಾಲ್ಮೇಷಿಯನ್ ವಾಸ್ತುವಿನ ಒಂದು ನಿದರ್ಶನ. ಕಡಲ ತೀರದ ಬಳಿಯ ಲೋಕ್ರುಮ್ ದ್ವೀಪದ ವನಗಳೂ ಕಿತ್ತಳೆ ತೋಟಗಳೂ ಪ್ರಸಿದ್ಧ.

	ಡೂಬ್ರಾವ್ನಿಕ್ ನಗರದ ಪ್ರಮುಖ ಆಕರ್ಷಣೀಯ ಕಟ್ಟಡಗಳಲ್ಲಿ ಒಂದಾದ ಚರ್ಚ್. ಮೂರನೆಯ ಧರ್ಮಯುದ್ಧ ಕಾಲದಲ್ಲಿ ಇಂಗ್ಲೆಂಡಿನ 1ನೆಯ ರಿಚರ್ಡ್ ಕಟ್ಟಿಸಿದ್ದು. 14ನೆಯ ಹಾಗೂ 15ನೆಯ ಶತಮಾನಗಳಿಗೆ ಸೇರಿದ ಫ್ರೆಂಚ್ ಹಾಗೂ ಡಾಮಿನಿಕನ್ ಗೋಪುರಗಳು, ನಗರ ಮಂದಿರ, ವ್ಯಾಪಾರಕೇಂದ್ರ ಮುಂತಾದವನ್ನು ಈ ನಗರ ಒಳಗೊಂಡಿದೆ.

	ಡೂಬ್ರಾವ್ನಿಕ್‍ನಿಂದ ಸಾರಯೇವೋಗೂ ಬೆಲ್ಗ್ರೇಡಿಗೂ ನ್ಯಾರೋ ಗೇಜ್ ರೈಲುಮಾರ್ಗವಿದೆ. ಡೂಬ್ರಾವ್ನಿಕ್ ಬಳಿ ಇರುವ ಹೊಸ ರೇವು ಆದ ಗ್ರೂeóïನಿಂದ ಇತರ ಡಾಲ್ಮೇಷಿಯನ್ ಬಂದರುಗಳಿಗೂ ಇಟಲಿಗೂ ಹಡಗುಗಳು ಸಂಚರಿಸುತ್ತವೆ. ಡೂಬ್ರಾವ್ನಿಕ್‍ನ ಕೈಗಾರಿಕೆಗಳು ಮದ್ಯ, ಚೀಸ್, ಚಕ್ಕಳ, ದಾರ, ಲೋಹವಸ್ತು ಮತ್ತು ಸಾಬೂನು ತಯಾರಿಕೆ, ತೈಲ ಪರಿಷ್ಕರಣ, ಸ್ಲೇಟ್ ಗಣಿಗಾರಿಕೆ. ಪ್ರವಾಸೋದ್ಯಮವೂ ಗಮನಾರ್ಹವಾದ್ದು.
(ಪಿ.ಬಿ.)

	ಸ್ಲಾವ್ ಬುಡಕಟ್ಟಿನ ಆಕ್ರಮಣದಿಂದಾಗಿ ಎಪಿಡಾರಸಿನಿಂದ ಓಡಿಬಂದ ರೋಮನ್ ನಿರಾಶ್ರಿತರು ಈ ನಗರವನ್ನು ನಿರ್ಮಿಸಿದರು. ಆಗ ಇದಕ್ಕೆ ರಗೂಸಿಯಂ ಎಂಬ ಹೆಸರಿತ್ತು. ಇಟಾಲಿಯನ್ ಭಾಷೆಯಲ್ಲಿ ಈಗಲೂ ಇದಕ್ಕೆ ರಗೂಸ ಎಂಬ ಹೆಸರಿದೆ. ಇಲ್ಲಿಯ ಲ್ಯಾಟಿನ್ ಜನರೊಂದಿಗೆ ಸ್ಲಾವರೂ ಅನಂತರ ಸೇರಿದರು. ಹೀಗೆ ಹಿಂದಿನಿಂದಲೂ ಇದು ಎರಡು ನಾಗರಿಕತೆಗಳ ಸಂಧಿಸ್ಥಳವಾಯಿತು. 9-12ನೆಯ ಶತಮಾನಗಳಲ್ಲಿ ವಿದೇಶೀಯರ ಆಕ್ರಮಣವನ್ನು ಇದು ಯಶಸ್ವಿಯಾಗಿ ಎದುರಿಸಿತಾದರೂ 1205-1358ರಲ್ಲಿ ವೆನಿಷ್‍ಯನ್ ಆಧಿಪತ್ಯವನ್ನು ಒಪ್ಪಿಕೊಳ್ಳಬೇಕಾಯಿತು; ಆದರೂ ತನ್ನ ಸ್ವಾತಂತ್ರ್ಯವನ್ನು ಬಹಳ ಮಟ್ಟಿಗೆ ಉಳಿಸಿಕೊಂಡಿತು. ಎಲ್ಲ ರಾಷ್ಟ್ರಗಳ ನಿರಾಶ್ರಿತರಿಗೂ ಈ ನಗರ ನೆಲೆ ನೀಡಿತು. ಅವರ ಪೈಕಿ ಇಂಗ್ಲೆಂಡಿನ ದೊರೆ 1ನೆಯ ರಿಚರ್ಡನೂ ಒಬ್ಬ. ಇದು ವಿಸ್ತಾರಗೊಂಡಿತು. ವಾಣಿಜ್ಯಶಕ್ತಿಯಾಗಿಯೂ ಪರಿಣಮಿಸಿತು. ಇದರ ವ್ಯಾಪಾರ 16ನೆಯ ಶತಮಾನದಲ್ಲಿ ಅಮೆರಿಕ-ಭಾರತಗಳ ವರೆಗೆ ವಿಸ್ತರಿಸಿತ್ತು. 1358-1526ರಲ್ಲಿ ಇದು ಹಂಗರಿಯ ಆಶ್ರಿತ ರಾಜ್ಯವಾಗಿತ್ತು. ಅನಂತರ ಇಸ್ತಾನ್‍ಬುಲ್‍ಗೆ ಕಪ್ಪ ಸಲ್ಲಿಸಬೇಕಾಗಿತ್ತು. ಹಲವು ಶತಮಾನಗಳ ಕಾಲದ ಡೂಬ್ರಾವ್ನಿಕ್‍ನ ಜನರು ತುಂಬ ಕೌಶಲದಿಂದ ತಮ್ಮ ನಗರರಾಜ್ಯದ ಸ್ಥಾನವನ್ನು ಕಾಯ್ದುಕೊಂಡು ಬಂದರು. 15-17ನೆಯ ಶತಮಾನಗಳಲ್ಲಿ ಡೂಬ್ರಾವ್ನಿಕ್‍ನಲ್ಲಿ ಕಲೆ ಸಾಹಿತ್ಯಗಳು ಬೆಳೆದುವು. ದಕ್ಷಿಣ ಸ್ಲಾವರ ಇತಿಹಾಸದಲ್ಲಿ ಮೊದಲ ಬಾರಿಗೆ ಜನತೆಯ ಭಾಷೆಯನ್ನು ಸಾಹಿತ್ಯದಲ್ಲಿ ಬಳಸಿದವರು ಡೂಬ್ರಾವ್ನಿಕ್ ಕವಿಗಳು. ಇವರ ಪೈಕಿ ಈವಾನ್ ಗೂಂಡೂಲಿಚ್ (1588-1638) ಪ್ರಸಿದ್ಧ. "ದಕ್ಷಿಣ ಸ್ಲಾವಾನಿಕ್ ಆತೆನ್ಸ್" ಎಂಬ ಕೀರ್ತಿ ಕೂಡ ಇದಕ್ಕೆ ಬಂತು. 1667ರಲ್ಲಿ ಸಂಭವಿಸಿದ ಭೂಕಂಪದಿಂದ ನಗರದ ಹಲವು ಭಾಗಗಳು ನಾಶವಾದುವು. ನೆಪೋಲಿಯಾನಿಕ್ ಯುದ್ಧಗಳ ಸಮಯದಲ್ಲಿ ನಗರ ಮತ್ತೆ ಉಚ್ಫ್ರಾಯಗೊಂಡಿತು. 1808ರಲ್ಲಿ ನೆಪೋಲಿಯನ್ ಇದನ್ನು ಗೆದ್ದ. 1814ರಲ್ಲಿ ಇದು ಆಸ್ಟ್ರಿಯಕ್ಕೆ ಸೇರಿತು. 1918ರಲ್ಲಿ ಯೂಗೊಸ್ಲಾವಿಯದ ಭಾಗವಾಯಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ 1941-44ರಲ್ಲಿ ಇದು ಜರ್ಮನಿ ಮತ್ತು ಇಟಲಿಯ ವಶದಲ್ಲಿತ್ತು. ಈಗ ಯೂಗೊಸ್ಲಾವಿಯದಲ್ಲಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ